ಕರುನಾಡಿಗೆ ಜಲದಿಗ್ಬಂಧನ

ಕರುನಾಡಿಗೆ ಜಲದಿಗ್ಬಂಧನ
Spread the love

ಬೆಂಗಳೂರು/ಮಂಗಳೂರು/ಹುಬ್ಬಳ್ಳಿ: ರಾಜ್ಯ ದಲ್ಲಿ ವರುಣನ ರುದ್ರನರ್ತನ ಮುಂದುವರಿದಿದ್ದು, ಶುಕ್ರವಾರ ಮತ್ತೆ 13 ಮಂದಿ ಮೃತರಾಗಿದ್ದಾರೆ.

ಕೊಡಗಿನಲ್ಲೂ ಕಳೆದ ವರ್ಷದ ಹಾಗೆಯೇ ವರುಣನ ಆವೇಶ ಜೋರಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೋರಂಗಾಲ ಮತ್ತು ತೋರ ಎಂಬಲ್ಲಿ ಭೂಕುಸಿತ ಸಂಭವಿಸಿ ಒಟ್ಟು 7 ಮಂದಿ ಸಾವಿಗೀಡಾಗಿ ದ್ದಾರೆ. ಇನ್ನೂ 8 ಮಂದಿ ನಾಪತ್ತೆಯಾಗಿದ್ದಾರೆ. ಇತ್ತ ಹುಣ ಸೂರು ತಾಲೂಕಿನ ವೀರನಹೊಸಹಳ್ಳಿ ಗಿರಿಜನ ಹಾಡಿಯಲ್ಲಿ ಮನೆ ಗೋಡೆ ಕುಸಿದು ಒಬ್ಬರು ಮೃತರಾಗಿದ್ದಾರೆ. ಉತ್ತರ ಕನ್ನಡದ ಅಂಕೋಲಾ ಡೋಗ್ರಿ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬೊಬ್ಬರು ಕೊಚ್ಚಿ ಹೋಗಿ ಅಸುನೀಗಿದ್ದಾರೆ. ಗೋಕಾಕ್‌ನಲ್ಲೂ ವ್ಯಕ್ತಿಯೊಬ್ಬರು ಕಾಲುವೆಗೆ ಜಾರಿ ಬಿದ್ದು ಸಾವನ್ನಪ್ಪಿ ದ್ದಾರೆ. ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕೊಡಗಿನಲ್ಲಿ ಭೂಕುಸಿತ: ಕೊಡಗಿನಲ್ಲಿ ಸತತ 4ನೇ ದಿನವೂ ಮಹಾಮಳೆ ಮುಂದುವರಿದಿದ್ದು, ಕೋರಂಗಾಲ ಮತ್ತು ತೋರ ಎಂಬಲ್ಲಿ ಭೂಕುಸಿತ ಸಂಭವಿಸಿ ಒಟ್ಟು 7 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 604 ಕುಟುಂಬಗಳ 2,136 ಮಂದಿಗೆ ನೆಲೆ ಕಲ್ಪಿಸಲಾಗಿದೆ. ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತವಾಗಿದೆ.

ಕರಾವಳಿಯಲ್ಲಿ ಜೋರು ಮಳೆ: ನಾಗರ ಪಂಚ ಮಿಯ ಮರುದಿನದ ಬಳಿಕ 2 ದಿನಗಳ ಕಾಲ ವಿರಾಮ ನೀಡಿದ್ದ ಮಳೆ ಶುಕ್ರವಾರ ಕರಾವಳಿ, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಮತ್ತು ಒಳನಾಡು ಗಳಲ್ಲಿ ಜೋರಾಗಿ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ನೇತ್ರಾವತಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ.

ಇಂದಿನಿಂದ ಮಳೆ ಇಳಿಮುಖ ಸಾಧ್ಯತೆ: ಹವಾಮಾನ ಇಲಾಖೆಯು ಕಳೆದ ಎರಡು ಮೂರು ದಿನಗಳಿಂದ ಕರಾವಳಿಯಲ್ಲಿ ಘೋಷಿಸಿದ್ದ ರೆಡ್‌ ಅಲರ್ಟ್‌ ಅನ್ನು ಶುಕ್ರವಾರ ಹಿಂದೆಗೆದುಕೊಂಡಿದ್ದು, ಆರೆಂಜ್‌ ಅಲರ್ಟ್‌ ಹೊರಡಿಸಿದೆ. ಪಶ್ಚಿಮ ಕರಾವಳಿಯ ಉತ್ತರ ಭಾಗದಲ್ಲಿ ರೂಪುಗೊಂಡಿದ್ದ ವಾಯುಭಾರ ಕುಸಿತವು ಗುಜರಾತ್‌ ಮೂಲಕ ಅರಬೀ ಸಮುದ್ರಕ್ಕೆ ಸಾಗುವುದರಿಂದ ರಾಜ್ಯ ಕರಾವಳಿ ಭಾಗದಲ್ಲಿ ಮಳೆ ಒಂದೆರಡು ದಿನಗಳಲ್ಲಿ ಮಳೆ ಕ್ಷೀಣಿಸುವ ಸಾಧ್ಯತೆ ಇದೆ.

ಬೆಳಗಾವಿಗೆ ಪ್ರವಾಹದ ಬಿಸಿ: ಬೆಳಗಾವಿ ಜಿಲ್ಲೆ ಪ್ರವಾಹ ಸದ್ಯಕ್ಕೆ ತಹಬದಿಗೆ ಬರುವ ಸ್ಥಿತಿ ಕಾಣುತ್ತಿಲ್ಲ. ಕೃಷ್ಣಾ ನದಿಗೆ ಕೊಯ್ನಾ, ರಾಜಾಪುರ ಬ್ಯಾರೇಜ್‌ ಸೇರಿದಂತೆ ವಿವಿಧೆಡೆಯಿಂದ 6.42 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಲೇ ಇದೆ. ಚಿಕ್ಕೋಡಿ, ಖಾನಾಪುರ, ರಾಮದುರ್ಗ ಬಾಹ್ಯ ಸಂಪರ್ಕ ಕಡಿದುಕೊಂಡಿವೆ. ಗೋಕಾಕ ನಗರವನ್ನು ಘಟಪ್ರಭಾ ಪೂರ್ತಿಯಾಗಿ ತನ್ನೊಡಲಲ್ಲಿ ಸೇರಿಸಿಕೊಂಡಿದೆ. ಮಲಪ್ರಭಾ ನದಿ ಅಬ್ಬರಕ್ಕೆ ಸವದತ್ತಿ ತತ್ತರಿಸಿ ಹೋಗಿದೆ. ಇದುವರೆಗೆ ಜಿಲ್ಲೆಯಲ್ಲಿ 1,45,368 ಜನರನ್ನು ಸ್ಥಳಾಂತರಿಸಲಾಗಿದೆ. 323 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಚಿಕ್ಕೋಡಿ ತಾಲೂಕಿನ ಸದಲಗಾ, ಇಂಗಳಿ, ಚಂದೂರ ಟೇಕ್‌, ಯಡೂರವಾಡಿ ಸೇರಿದಂತೆ ಹಲವು ಗ್ರಾಮಗಳು ನಡುಗಡ್ಡೆಯಾಗಿವೆ. ರಕ್ಷಣೆಗೆ ವಾಯುಪಡೆಯ ಎರಡು ಎಂಐ 17 ಹಾಗೂ 1 ಚೇತಕ್‌ ವಿಮಾನ, ನೌಕಾಸೇನೆಯ ಹಗುರ ಹೆಲಿಕಾಪ್ಟರ್‌ ಬಳಕೆ ಮಾಡಲಾಗುತ್ತಿದೆ. ಮಹಾರಾಷ್ಟ್ರ, ಗೋವಾ ಸಂಪರ್ಕ ಕಡಿತ ಮುಂದುವರೆದಿದೆ.

ಉತ್ತರ ಕನ್ನಡ ವಿಲವಿಲ : ಸತತ ಮಳೆಯಿಂದ ಉತ್ತರ ಕನ್ನಡ ಜಿಲ್ಲೆ ಕಂಗಾಲಾಗಿದೆ. ಗಂಗಾವಳಿ ನೀರಿನ ಮಟ್ಟ ಏಕಾಏಕಿ ಆರು ಅಡಿ ಹೆಚ್ಚಳವಾಗಿ ಆತಂಕ ಮೂಡಿಸಿದೆ. ಸುಂಕಸಾಳ ಹೈಲೆಂಡ್‌ ಹೋಟೆಲ್ ರಾಷ್ಟ್ರೀಯ ಹೆದ್ದಾರಿ 63ರ ಬಳಿ 80ಕ್ಕೂ ಹೆಚ್ಚಾ ಲಾರಿಗಳೂ ನೀರಿನಲ್ಲಿ ಸಿಲುಕಿಕೊಂಡಿವೆ. ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವಿನಗುಂಡಿ ಸಮೀಪ ಹೆದ್ದಾರಿ ಪಕ್ಕ ಭೂಮಿ ಕುಸಿದು ಸಂಪರ್ಕ ಕಡಿತಗೊಂಡಿದೆ. ದಾಂಡೇಲಿಯ ಬೈಲುಪಾರು ಸೇತುವೆ 24 ವರ್ಷಗಳ ನಂತರ ಸಂಪೂರ್ಣ ಮುಳುಗಡೆಯಾಗಿದೆ. ಕಾಳಿ, ಅಘನಾಶಿನಿ ನೀರಿನ ಮಟ್ಟವೂ ಏರಿಕೆಯಾಗುತ್ತಲೇ ಇದೆ.

ಕೆಆರ್‌ಎಸ್‌ಗೆ ಭಾರೀ ನೀರು
ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಭರ್ಜರಿ ನೀರು ಹರಿದುಬರುತ್ತಿದೆ. ಕಾವೇರಿ ಕಣಿವೆ ವ್ಯಾಪ್ತಿಯ ಗೊರೂರು ಮತ್ತು ಹಾರಂಗಿ ಭರ್ತಿಯಾಗಿದ್ದು ನೀರನ್ನು ಹೊರ ಬಿಡಲಾಗುತ್ತಿದೆ. ಶನಿವಾರ ಬೆಳಗ್ಗೆಯ ಹೊತ್ತಿಗೆ ಕೆಆರ್‌ಎಸ್‌ನಲ್ಲಿ 107 ಅಡಿ ನೀರು ಸಂಗ್ರಹವಾಗಬಹುದು ಎಂದು ಅಂದಾಜಿಸ ಲಾಗಿದೆ. ಅಣೆಕಟ್ಟೆಗೆ 73,284 ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 124 ಅಡಿಗಳಾಗಿದ್ದು, ಪ್ರಸ್ತುತ 102 ಅಡಿಗೆ ತಲುಪಿದೆ.

ಮಲೆನಾಡಿನಲ್ಲಿ ನಿಲ್ಲದ ಮಳೆ
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಮುಂದುವರಿದಿದೆ. ತುಂಗಾ, ಭದ್ರಾ, ಹೇಮಾವತಿ ಉಕ್ಕಿ ಹರಿಯುತ್ತಿವೆ. ಚಿಕ್ಕಮಗಳೂರಿನಲ್ಲಿ ಗುಡ್ಡ ಕುಸಿತದಿಂದ ರೈಲು ಹಾಗೂ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೊರನಾಡು ಕ್ಷೇತ್ರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಶೃಂಗೇರಿಯಲ್ಲಿ ಪ್ರಸಾದ ನಿಲಯಕ್ಕೂ ನೀರು ನುಗ್ಗಿದೆ. ಚಾರ್ಮಾಡಿಘಾಟ್ ಬಂದ್‌ ಆಗಿದೆ. ಶಿವಮೊಗ್ಗ ನಗರ ಸೇರಿದಂತೆ ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಸಾಗರ ತಾಲೂಕಿನ ಬೀಸನಗದ್ದೆ ನಡುಗಡ್ಡೆಯಾಗಿದೆ.

2 ಲಕ್ಷ ಜನ ಸ್ಥಳಾಂತರ
ಅತ್ತ ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಪ್ರವಾಹ ತಗ್ಗಿಲ್ಲ. ಅಬ್ಬರಿಸುತ್ತಿರುವ ನದಿಗಳ
ರೌದ್ರನರ್ತನ ಇನ್ನೂ ನಿಂತಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 1.90ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಐಹೊಳೆ, ಪಟ್ಟದಕಲ್ಲ ಸೇರಿದಂತೆ ಪ್ರವಾಸಿ ತಾಣಗಳು, ದೇಗುಲಗಳು ಮುಳುಗಡೆಯಾಗಿವೆ. 50ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾ, ಭೀಮಾ,
ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ,
ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ವರದಾ, ತುಂಗಾ, ಭದ್ರಾ, ಹೇಮಾವತಿ ನದಿಗಳ ಒಡಲು ಹಿಗ್ಗುತ್ತಲೇ ಇದೆ. ತೀರಪ್ರದೇಶದಲ್ಲಿ ಬದುಕು ದುರ್ಭರವಾಗಿದೆ. ಹೆಲಿಕಾಪ್ಟರ್‌ಗಳ ಮೂಲಕ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಗಂಜಿ ಕೇಂದ್ರಗಳಲ್ಲಿ ಜನತೆ ಕಣ್ಣೀರಿಡುತ್ತಿದ್ದಾರೆ. ಲಕ್ಷಾಂತರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ರಾಜ್ಯದಲ್ಲಾದ ಪ್ರವಾಹ ಸ್ಥಿತಿ ನಿಟ್ಟಿನಲ್ಲಿ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ.ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ಗೆ ಪ್ರಸ್ತಾವನೆ
ಸಲ್ಲಿಸಿದರೆ ಕೇಂದ್ರದಿಂದ ಅದರ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರವಾಹದಿಂದಾದ ಹಾನಿ ಕುರಿತಾದ ವರದಿಯನ್ನು ಪ್ರಧಾನಿ ಮೋದಿಯವರಿಗೆ
ನೀಡುತ್ತೇನೆ.
-  ಪ್ರಹ್ಲಾದ ಜೋಶಿ,
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

Admin

Admin

9909969099
Right Click Disabled!